ಆದಿಚನಲ್ಲೂರು
ಇದು ತಿನ್ನೆವೇಲಿ ಜಿಲ್ಲೆಯಲ್ಲಿದ್ದು ಕಬ್ಬಿಣಯುಗದ ಅವಶೇಷಗಳನ್ನು ಒಳಗೊಂಡಿರುವ ಸ್ಥಳ. ಜರ್ಮನಿಯ ಡಾ || ಜಾಗೋರ್ ಅಗೆತಗಳನ್ನು ನಡೆಸಿ (1876) ಇದರ ಪ್ರಾಮುಖ್ಯವನ್ನು ಬೆಳಕಿಗೆ ತಂದ. ಸಮರ್ಪಕವಾದ ಅಗೆತಗಳನ್ನು ಇಲ್ಲಿ ನಡೆಸಿ (1889 - 1905) ಇದರ ಅವಶೇಷಗಳ ನಿಜವಾದ ಮಹತ್ತ್ವವನ್ನು ಗುರುತಿಸಿದವ ಅಲೆಕ್ಸಾಂಡರ್ ರೀ ಎಂಬ ಪ್ರಾಕ್ತನಶಾಸ್ತ್ರಜ್ಞ. ಈ ಅಗೆತಗಳಲ್ಲಿ ದೊರಕಿದ ಬಹುಪಾಲು ಅವಶೇಷಗಳು ಮದ್ರಾಸಿನ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿವೆ.
ಬೃಹದಾಕಾರದ ಮಡಕೆಗಳಲ್ಲಿ ಮನುಷ್ಯನ ಅಸ್ಥಿಗಳನ್ನು ತಲೆಬುರುಡೆಗಳನ್ನು ಹೂಳಿರುವುದೇ (ಅರ್ನ್ ಬರಿಯಲ್ಸ್) ಆದಿಚನಲ್ಲೂರಿನ ವೈಶಿಷ್ಟ್ಯ. ಇವುಗಳಲ್ಲಿ ಸಾಮಾನ್ಯವಾಗಿ ದಕ್ಷಿಣಭಾರತದಲ್ಲಿ ಎಲ್ಲೆಲ್ಲೂ ಕಾಣುವ ಬೃಹತ್‍ಶಿಲೆಯ ವಾಸ್ತುಶಿಲ್ಪ (ಮೆಗಾಲಿಥಿಕ್) ಕಾಣಬರುವುದಿಲ್ಲ. ಕಲ್ಲಿನ ವೃತ್ತಗಳಾಗಲೀ ನೆಟ್ಟಗೆ ಹೂಳಿರುವ ಕಲ್ಲುಗಳಾಗಲೀ ಇಲ್ಲದೇ ಇರುವುದರಿಂದ ಆದಿಚನಲ್ಲೂರಿನ ಸಂಸ್ಕøತಿಯನ್ನು ಬೃಹತ್ ಶಿಲಾಯುಗದ ಸಂಸ್ಕøತಿ ಎಂದು ಕರೆಯಲು ಕೆಲವರು ವಿರೋಧಿಸುತ್ತಾರೆ. ಆದರೆ ಕೆಂಪು, ಕಪ್ಪುಬಣ್ಣದ ಮಡಕೆಗಳು, ಮೇಲಾಗಿ ಕಬ್ಬಿಣದ ಆಯುಧಗಳಿಂದ ಅದನ್ನು ಮೆಗಾಲಿಥಿಕ್ ಎಂದು ಕರೆಯಬಹುದೆಂದು ಕೆಲವರು ವಾದಿಸುತ್ತಾರೆ. ಮನುಷ್ಯನ ಅಸ್ಥಿಗಳನ್ನು ಉದ್ದನೆಯ ಮತ್ತು ಚೂಪಾದ ತಳವುಳ್ಳ ಮಡಕೆಗಳಲ್ಲಿ ತುಂಬಿ, ಮಡಕೆಯಷ್ಟೇ ಉದ್ದ ಮತ್ತು ಸುತ್ತಳತೆಯ ಹಳ್ಳಗಳನ್ನು ತೆಗೆದು ಹೂಳಲಾಗಿದೆ. ಅಸ್ಥಿಗಳ ಜೊತೆಗೆ ಕಬ್ಬಿಣದ ಗುದ್ದಲಿಗಳು, ಚಾಕುಗಳು, ತಟ್ಟೆಗಳು, ಬಾಣಗಳು ಮತ್ತು ಕಂಚಿನ ಮುಚ್ಚಳಗಳು, ಚಿನ್ನದ ಆಭರಣಗಳು ಮತ್ತು ಕಾರ್ನಿಲಿಯನ್ ಮಣಿಗಳೂ ದೊರಕಿವೆ. ದೊರಕಿರುವ ಚಿನ್ನದ ಮತ್ತು ಕಂಚಿನ ಆಭರಣಗಳು ದಕ್ಷಿಣ ಭಾರತದಲ್ಲಿ ಎಲ್ಲೂ ಸಿಗದಿರುವುದು ಗಮನಾರ್ಹ. ಇಂಥ ಅವಶೇಷಗಳು ಪ್ಯಾಲೆಸ್ಟೈನ್, ಸಿರಿಯ ಮತ್ತು ಸೈಪ್ರಿಸ್‍ಗಳಲ್ಲಿ ದೊರಕಿರುವುದು ಗಮನಿಸಬೇಕಾದ ಅಂಶ. ಆದಿಚನಲ್ಲೂರಿನ ಕಬ್ಬಿಣದ ತ್ರಿಶೂಲದಂಥ ಅವಶೇಷಗಳ ಆಧಾರದ ಮೇಲೆ ತಮಿಳುನಾಡಿನ ಅತ್ಯಂತ ಪೂಜ್ಯ ದೇವತೆಯಾದ ಮುರುಗನ ಉಗಮವನ್ನು ಈ ಕಾಲಕ್ಕೆ ಕೊಂಡೊಯ್ಯಲು ಅನೇಕ ವಿದ್ವಾಂಸರು ಪ್ರಯತ್ನಿಸಿದ್ದಾರೆ.

ಇಲ್ಲಿನ ಜನಗಳು ಬತ್ತವನ್ನು ಬೆಳೆಯುತ್ತಿದ್ದರೆಂದು ಹೇಳಬಹುದು. ಇಲ್ಲಿ ದೊರಕಿರುವ ಕೆಲವು ಕೆಂಪು ಮಣ್ಣಿನ ಮಡಕೆಗಳಲ್ಲಿ ಅದರ ಅವಶೇಷಗಳು ಮತ್ತು ಒಂದು ಕಂಚಿನ ಪಾತ್ರೆಯಲ್ಲಿ ಅಕ್ಕಿಯ ಅವಶೇಷವೂ ಉಳಿದುಬಂದಿದೆ.

ಇಲ್ಲಿ ದೊರೆತಿರುವ ತಲೆಬುರುಡೆಗಳು ಭಾರತದ ಮಾನವಜನಾಂಗದ ಚರಿತ್ರೆಗೆ ಮುಖ್ಯ ಮಾಹಿತಿಯನ್ನು ಒದಗಿಸುತ್ತವೆ. ಜುಕರ್‍ಮನ್ ಎಂಬ ಮಾನವಶಾಸ್ತ್ರಜ್ಞ ಇವನ್ನು ಪರೀಕ್ಷಿಸಿ, ಭಾರತದಲ್ಲಿ ಕಬ್ಬಿಣಯುಗವನ್ನು ಪ್ರಾರಂಭಿಸಲು ಕಾರಣರಾದವರು ದ್ರಾವಿಡರು ಎಂದು ವಾದಿಸಿದ್ದಾನೆ. ಈ ವಿಚಾರವಿನ್ನೂ ಚರ್ಚಾಸ್ಪದವಾಗಿದ್ದರೂ ಆದಿಚನಲ್ಲೂರಿನಲ್ಲಿ ದೊರಕಿರುವ ತಲೆಯ ಬುರುಡೆಗಳು ದ್ರಾವಿಡಭಾಷೆಯನ್ನಾಡುತ್ತಿದ್ದ ದಕ್ಷಿಣ ಭಾರತದ ಜನಾಂಗದವರದ್ದು ಎಂದು ಖಚಿತವಾಗಿ ಹೇಳಬಹುದು. 		
(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ